ಕೆಲ್ಲಿ, ಹೂವರ್ಡ್ ಅಟ್‍ವುಡ್

ಸ್ತ್ರೀರೋಗ ನಿದಾನಕ್ಕಾಗಿ ಹೆಸರಾಂತ ಅಮೆರಿಕದ ವೈದ್ಯ.  ಜನನ ನ್ಯೂ ಜರ್ಸಿಯಲ್ಲಿ.  ಪನ್ಸಿಲ್ವೇನಿಯ ವಿಶ್ವವಿದ್ಯಾಲಯಲ್ಲಿ ವೈದ್ಯ ಪದವೀಧರನಾದ (1882).  ವೈದ್ಯ ಕಸುಬನ್ನು ಹಿಡಿದು ಫಿಲಿಡೆಲ್ಫಿಯದಲ್ಲಿ ಹೆಂಗಸರ ಆಸ್ಪತ್ರೆಯನ್ನು ಸ್ಥಾಪಿಸಿದ.  ಇದೇ ಮುಂದೆ ಕೆನ್ಸಿಂಗ್ ಟನ್ ಹೆಂಗಸರ ಆಸ್ಪತ್ರೆಯಾಯಿತು.  ಒಂದು ವರ್ಷ (1888) ಹೆರಿಗೆ ವೈದ್ಯ ಪ್ರಾಧ್ಯಾಪಕನಾಗಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಲ್ಲೂ ಆಮೇಲೆ 1919ರ ತನಕ ಹೆರಿಗೆ ವೈದ್ಯ ಮತ್ತು ಸ್ತ್ರೀರೋಗ ಪ್ರಾಧ್ಯಾಪಕ ಅಲ್ಲದೆ ಆ ಇಲಾಖೆಯ ಮುಖ್ಯಸ್ಥನಾಗಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲೂ ಕೆಲಸದಲ್ಲಿದ್ದ.  ಆಸ್ಲರ್, ಹಾಲ್‍ಸ್ಟೆಡ್, ವೆಲ್ಜ್ ಇವರೊಂದಿಗೆ ಸೇರಿಕೊಂಡು ಆ ಸಂಸ್ಥೆಗೆ ಪ್ರಪಂಚದಲ್ಲಿ ಅಪಾರ ಕೀರ್ತಿ ತರಲು ನೆರವಾದ.  ತಾನೇ ಎಲ್ಲಕ್ಕೂ  ಮುಖ್ಯ ಕಾರ್ಯಕರ್ತನಾಗಿದ್ದ.  ಬಾಲ್ಟಿಮೋರಿನ ಆಸ್ಪತ್ರೆಯನ್ನು ಸ್ಥಾಪಿಸಿ (1892)ನಡೆಸಿದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯಂ ಬಳಕೆಯನ್ನೂ ಸ್ಥಳೀಯ ವೇದನ ಶಮನಕ್ಕಾಗಿ ಕೋಕೇನನ್ನೂ (ನೋಡಿ) ಜಾರಿಗೆ ತಂದ ಮೊದಲಿಗ ಕೆಲ್ಲಿ.  ಮೂತ್ರಕೋಶದೊಳಗೆ ನೋಡಬಹುದಾದ ಕಂಕೋಶದರ್ಶಕ (ಸಿಸ್ಟೋಸ್ಕೋಪ್), ಹೆರಿಗೆಯಾಗುವಾಗ ತಳಕ್ಕೆ ಹಾಕುವ ರಬ್ಬರಿನ ಮೆತ್ತೆ, ಗುದ ಮತ್ತು ಕಂಕೋಶಗಳ ಒಳಗನ್ನಡಿಗಳನ್ನು (ಸ್ಪೆಕ್ಯುಲಂ) ಈತ ತಯಾರಿಸಿದ.  ಸಡಿಲ ಬಿದ್ದ ಗರ್ಭಕೋಶವನ್ನು ಹೊಟ್ಟೆಯ ಗೋಡೆಗೆ ಎತ್ತಿಕಟ್ಟಿ ಹೊಲೆಯುವ ಅವನ ಹೆಸರಿನ ಶಸ್ತ್ರಕ್ರಿಯೆ ಈಗಲೂ ಹೆಸರಾಗಿದೆ.  ಕೆಲ್ಲಿ ವೈದ್ಯಶಾಸ್ತ್ರದಲ್ಲಿ ಒಳ್ಳೆಯ ಬರೆಹಗಾರನಾಗಿದ್ದ ಕೂಡ.  ಸುಮಾರು 500 ಬರೆಹಗಳು ಅವನ ಹೆಸರಲ್ಲಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ